ಸದಾಶಿವರಾವ್ ಗರೂಡ
	1879-1954. ರಂಗಭೂಮಿಯ ಸುಪ್ರಸಿದ್ಧ ನಟ, ನಾಟಕಕಾರ, ರಂಗನಿರ್ಮಾಪಕ. ಗರೂಡ ಎಂಬುದು ಮನೆತನದ ಹೆಸರು. ತಂದೆ ಕೊಪ್ಪಳದ ಗುರುನಾಥ ಶಾಸ್ತ್ರಿಗಳು. ಎಳೆತದಲ್ಲಿ ತಾಯಿಯನ್ನು ಕಳೆದುಕೊಂಡ ಗರೂಡರು ಕಲಬುರ್ಗಿಯಲ್ಲಿ ಸೋದರಮಾನವ ಮನೆಯಲ್ಲಿ ಬೆಳೆದರು. ಮೊದಲಿನಿಂದ ಸಂಗೀತ ಸಾಹಿತ್ಯಗಳ ಕಡೆ ಒಲವಿದ್ದ ಇವರು ಕನ್ನಡ ನಾಟಕ ಮಂಡಳಿಯ ಸತ್ಯಹರಿಶ್ಚಂದ್ರ ನಾಟಕ ನೋಡಿದಾಗ, ಹೆಚ್ಚು ಸಂಸ್ಕಾರಗೊಂಡಿದ್ದ ಅಂದಿನ ಮರಾಠೀ ನಾಟಕಗಳೊಂದಿಗೆ ಆ ಕನ್ನಡ ನಾಟಕವನ್ನು ಹೋಲಿಸಿ ಹೀಯಾಳಿಸಿದ ಗೆಳೆಯರ ಮೇಲೆ ಹುರುಡುಗಟ್ಟಿ, ಪರಿಷ್ಕಾರಗೊಂಡ ಕನ್ನಡ ನಾಟಕವನ್ನು ರಚಿಸಿ ಪ್ರಯೋಗಿಸುವುದಾಗಿ ಪಣತೊಟ್ಟು, ಮಾರ್ಕಂಡೇಯ ಎಂಬ ತಮ್ಮ ಮೊದಲ ನಾಟಕವನ್ನು ಬರೆದು, ಶಿವ ಪ್ರಸಾದಿಕ ನಾಟಕ ಮಂಡಳಿ ಯನ್ನು ಕಟ್ಟಿ ಪ್ರಯೋಗಿಸಿ ಕಲ್ಬುರ್ಗಿಯ ಪ್ರೇಕ್ಷಕರನ್ನು ಮೆಚ್ಚಿಸಿದರು (1894). ಎರಡನೆಯ ನಾಟಕ ಬಂಧ ವಿಮೋಚನೆ. ಮುಂದೆ ಹನ್ನೆರಡು ವರ್ಷಗಳ ಕಾಲ ನಾಟಕಕಾರರಾಗಿ, ನಾಟ್ಯಶಿಕ್ಷಕ ರಾಗಿ ಕಲ್ಬುರ್ಗಿ, ಹೊಂಬಳ, ಕೊಪ್ಪಳ, ಬಿಜಾಪುರ, ಧಾರವಾಡಗಳ ಹಲವಾರು ನಾಟಕ ಸಂಸ್ಥೆಗಳಲ್ಲಿ ದುಡಿದರು.

	ಕೊಣ್ಣೂರು ನಾಟಕ ಮಂಡಳಿಯ ವ್ಯವಸ್ಥಾಪಕ ಶಿವಮೂರ್ತಿಸ್ವಾಮಿ ಕಣ ಬರಗೀಮಠ ಅವರ ನೆರವಿನಿಂದ 1919ರಲ್ಲಿ ಗರೂಡರು ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿಯನ್ನು ಕಟ್ಟಿದರು. ತಾವೇ ರಂಗನಾಟಕಗಳನ್ನು ರಚಿಸಿ, ಕಲಾವಿದರನ್ನು ಹುಡುಕಿ, ಆರಿಸಿ ಕರೆತಂದು, ನಿಷ್ಕøಷ್ಟವಾದ ಶಿಕ್ಷಣ ಕೊಟ್ಟು ಸಾರ್ಥಕ ಪ್ರಯೋಗಗಳನ್ನು ಮಾಡಿದರು. ಮುಂದಿನ ಮೂರು ದಶಕಗಳಲ್ಲಿ ದತ್ತಾತ್ರೇಯ ಮಂಡಲಿ ಕನ್ನಡ ನಾಡಿನ ಎಲ್ಲ ಮುಖ್ಯಪಟ್ಟಣಗಳಲ್ಲಿ ನಾಟಕಗಳನ್ನು ಆಡಿದುದಲ್ಲದೆ, ಮಹಾರಾಷ್ಟ್ರದ ಪುಣೆ, ಸಾಂಗಲಿ, ಕೊಲ್ಲಾಪುರಗಳಲ್ಲಿ ಪ್ರವಾಸ ಮಾಡಿ ಹೆಚ್ಚಿನ ಯಶಸ್ಸನ್ನು ಗಳಿಸಿತು. ಮನೋಜ್ಞಾವಾದ ಅಭಿನಯ ಕಲೆ ಹಾಗೂ ಶುದ್ಧ ಸಾಹಿತ್ಯಿಕ ನಾಟಕಗಳಿಂದಾಗಿ ಅತ್ಯಂತ ಪ್ರಸಿದ್ಧಿಗೆ ಬಂತು. ಗರೂಡರು ಒಟ್ಟಾರೆ ಐವತ್ತುನಾಲ್ಕು ರಂಗನಾಟಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಚೌತಿಯ ಚಂದ್ರ, ವತ್ಸಲಾಹರಣ, ಶಕ್ತಿವಿಲಾಸ, ಪಾದುಕಾ ಪಟ್ಟಾಭಿಷೇಕಗಳಂಥ ಪೌರಾಣಿಕ ನಾಟಕಗಳೂ ಎಚ್ಚಮನಾಯಕನಂಥ ಐತಿಹಾಸಿಕ ನಾಟಕವೂ ವಿವೇಕವಿಜಯ, ಬಲಸಿಂಹತಾರಾದಂಥ ಕಾಲ್ಪನಿಕ ಕಥಾವಸ್ತುವನ್ನು ಆಧರಿಸಿದ ನಾಟಕಗಳೂ ವಿಷಮವಿವಾಹ, ಉಗ್ರಕಲ್ಯಾಣ ದಂಥ ಸಾಮಾಜಿಕ ನಾಟಕಗಳೂ ಮಹಾತ್ಮ ಕಬೀರ ಮೊದಲಾಗಿ ಸಂತ ಜೀವನ ದರ್ಶನವನ್ನು ಪ್ರತಿಬಿಂಬಿಸಿದ ನಾಟಕಗಳೂ ಇವೆ. ಇವು ವೈಯಕ್ತಿಕವಾಗಿ ಗರೂಡರಿಗೆ ಅಪಾರವಾದ ಕೀರ್ತಿಯನ್ನೂ ಇವರ ಮಂಡಳಿಗೆ ಯಶಸ್ಸನ್ನೂ ತಂದುಕೊಟ್ಟವು.

	ಗರೂಡರು ಹುಟ್ಟುನಟರು. ಅಭಿನಯ ಕಲೆಯನ್ನೂ ಧ್ವನಿ ಬಳಕೆಯನ್ನೂ ಅವಿರತವಾಗಿ ಅಭ್ಯಸಿಸಿ ಆ ಕಲೆಗಳಿಗೆ ಶಾಸ್ತ್ರದ ಮಹತಿಯನ್ನು ಕೊಟ್ಟವರು. ಅಶೋಕ, ದಶರಥ, ಎಚ್ಚಮನಾಯಕ, ಕಬೀರದಾಸ ಮೊದಲಾಗಿ ಇವರು ಅಭಿನಯಿಸಿದ ಭೂಮಿಕೆಗಳು ಅಭಿನಯಕೇಸರಿ, ಕರ್ಣಾಟಕ ನಾಟಕಾಲಂಕಾರ ಎಂಬ ಪ್ರಶಸ್ತಿಗಳನ್ನು ಇವರಿಗೆ ಗಳಿಸಿಕೊಟ್ಟವು.

	ಗರೂಡರ ನಾಟಕಗಳಲ್ಲಿ, ಪ್ರದರ್ಶನಗಳಲ್ಲಿ, ಸಂಗೀತಕ್ಕಿಂತ ಹೆಚ್ಚಾಗಿ ಅಭಿನಯಕ್ಕೆ ಪ್ರಾಧಾನ್ಯ, ರಾಷ್ಟ್ರಪ್ರೇಮ ಹಾಗೂ ಭಾರತೀಯ ಸಂಸ್ಕøತಿಯ ಉದಾತ್ತತೆಯ ಸೆಳಕುಗಳು ಇವರ ನಾಟಕಗಳಲ್ಲಿ ಹಾಸುಹೊಕ್ಕಾದವು. ಎಂದೇ ಅಂದಿನ ವಿಮರ್ಶಕರ ಕಣ್ಣಿನಲ್ಲಿ ಗರೂಡರು ನಟರಾಗಿ, ನಾಟಕಕಾರರಾಗಿ, ದೇಶ ಸೇವಕರಾಗಿ, ಧರ್ಮಪ್ರಸಾರಕರಾಗಿ ಕನ್ನಡ ರಂಗಭೂಮಿಗೆ ದೇಗುಲದ ಪಾವಿತ್ರ್ಯವನ್ನು ತಂದುಕೊಟ್ಟ ದ್ರಷ್ಟಾರರಾದರು.						
		(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ